ಸಿಟ್ರಿಕ್ ಆಮ್ಲ
	ಒಂದು ಕಾರ್ಬನಿಕ ಸಂಯುಕ್ತ. ಅಣುಸೂತ್ರ: ಅ3ಊ4ಔಊ(ಅಔಔಊ)3. ನೀರಿನಲ್ಲಿ ಸುಲಭವಾಗಿಯೂ ಕಾರ್ಬನಿಕ ದ್ರಾವಕಗಳಲ್ಲಿ ಮಿತವಾಗಿಯೂ ಲೀನಿಸುವ ಬಿಳಿ ಸ್ಫಟಿಕೀಯ ಘನ. ದ್ರವನಬಿಂದು: 1530 ಸೆ ತ್ರಿಪ್ರತ್ಯಾಮ್ಲೀಯ (ಟ್ರೈಬೇಸಿಕ್) ಆಮ್ಲ.

	ಸಾಮಾನ್ಯವಾಗಿ ಉಪಾಪಚಯದ (ಮೆಟಬಾಲಿಸಮ್) ಸಾರ್ವತ್ರಿಕ ಮಧ್ಯಂತರ ಉತ್ಪನ್ನವಾಗಿರುವುದರಿಂದ ಅನೇಕ ಸಸ್ಯ ಮತ್ತು ಪ್ರಾಣಿಗಳಲ್ಲಿದೆ. ಜಂಬೀರ (ಸಿಟ್ರಸ್) ಫಲಗಳ ರಸಗಳಲ್ಲಿ ಅಧಿಕ ಪ್ರಮಾಣದಲ್ಲಿ ಲಭ್ಯ. ಇದನ್ನು ನಿಂಬೆರಸದಿಂದ ತಯಾರಿಸುವ ವಿಧಾನವನ್ನು ಷೀಲೆ (1742-86) ಎಂಬ ಸ್ವೀಡಿಷ್ ರಸಾಯನ ವಿಜ್ಞಾನಿಯೂ (1784) ಫಂಗಸ್‍ಕ್ರಿಮಿಗಳನ್ನು ಉಪಯೋಗಿಸಿ ಸಕ್ಕರೆಯಿಂದ ಪಡೆಯುವುದನ್ನು (1893) ವೆಹ್‍ಮರ್ ಎಂಬ ವಿಜ್ಞಾನಿಯೂ ಆವಿಷ್ಕರಿಸಿದರು.

	ನಿಂಬೆರಸ, ಅನಾನಸ್‍ರಸ ಮತ್ತು ಸಕ್ಕರೆ ಇವು ವಾಣಿಜ್ಯ ಸಿಟ್ರಿಕಾಮ್ಲದ ಪ್ರಮುಖ ಆಕರಗಳು. ನಿಂಬೆ ಅಥವಾ ಅನಾನಸ್ ರಸಕ್ಕೆ ಕ್ಯಾಲ್ಸಿಯಮ್ ಸಿಟ್ರೇಟ್ ಅವಕ್ಷೇಪಿಸುತ್ತದೆ. ಇದನ್ನು ಗಂಧಕಾಮ್ಲದಿಂದ ಉಪಚರಿಸಿ ದಾಗ ಸಿಟ್ರಿಕಾಮ್ಲ ಪುನರುದ್ಭವಿಸುತ್ತದೆ. ಆಸ್ಪರ್‍ಜಿಲ್ಲಸ್ ನೈಜರ್ ಎಂಬ ಬೂಷ್ಟಿನಿಂದ ಸಕ್ಕರೆಯನ್ನು ಕಿಣ್ವನಗೊಳಿಸಿದಾಗಲೂ (ಫರ್ಮೆಂಟ್) ಸಿಟ್ರಿಕಾಮ್ಲ ಲಭ್ಯ.

	ಸಂಶ್ಲೇಷಿತ ಪಾನೀಯಗಳು, ಜ್ಯಾಮ್, ಮುರಬ್ಬ ಮುಂತಾದವುಗಳ ಹಾಗೂ ಹಲವು ಔಷಧಿಗಳ ತಯಾರಿಕೆಯಲ್ಲಿ, ನೀಲಿನಕ್ಷೆ ಕಾಗದ ಮತ್ತು ವಸ್ತ್ರಮುದ್ರಣ ಉದ್ಯಮಗಳಲ್ಲಿ ಮತ್ತು ಲೋಹಗಳಿಗೆ ಮೆರುಗು ನೀಡವಲ್ಲಿ ಇವುಗಳ ಬಳಕೆ ಇದೆ. ವಿಶ್ಲೇಷಣಾತ್ಮಕ ರಸಾಯನ ವಿಜ್ಞಾನದಲ್ಲಿ ಸಿಟ್ರಿಕಾಮ್ಲ ಹಾಗೂ ಅದರ ಲವಣಗಳ ಮತ್ತು ಲೋಹೀಯ ಸಿಟ್ರೇಟುಗಳ ವ್ಯಾಪಕ ಬಳಕೆ ಉಂಟು.	
												(ಜಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ